ಪರಶುರಾಮಜಯಂತಿಯನ್ನು ಎಂದು ಆಚರಿಸಬೇಕು?
ಆಚಾರ್ಯರೇ, ತಾವು ಉಪನ್ಯಾಸದಲ್ಲಿ ಅಕ್ಷಯತೃತೀಯಾದಂದು ಪರಶುರಾಮಜಯಂತಿ ಎಂದು ಹೇಳಿದ್ದೀರಿ. ಪಂಚಾಂಗದಲ್ಲಿ ದ್ವಿತೀಯಾ ತಿಥಿ ಇರುವ ದಿವಸ (28/4/2017) ಪರಶರುರಾಮ ಜಯಂತಿ ಎಂದೂ ಹಾಗೂ ಶನಿವಾರ 29/4/2017 ಅಕ್ಷಯ ತೃತೀಯಾ ಎಂದು ಮುದ್ರಿಸಿದ್ದಾರೆ. ದಯವಿಟ್ಟು ಗೊಂದಲ ಪರಿಹರಿಸಿ. — ನರಸಿಂಹ ಮೂರ್ತಿ, ಕೋಲಾರ. ಶ್ರೀ ಪರಶುರಾಮದೇವರ ಅವತಾರವಾದದ್ದು ಅಕ್ಷಯತೃತೀಯಾದಂದೇ. ಸಂಶಯವಿಲ್ಲ. ಸ್ಕಂದಪುರಾಣದಲ್ಲಿ ಹೀಗೆ ಸ್ಪಷ್ಟ ವಚನವಿದೆ — ವೈಶಾಖಸ್ಯ ಸಿತೇ ಪಕ್ಷೇ ತೃತೀಯಾಯಾಂ ಪುನರ್ವಸೌ । ನಿಶಾಯಾಃ ಪ್ರಥಮೇ ಯಾಮೇ ರಾಮಾಖ್ಯಃ ಸಮಯೇ ಹರಿಃ ।। ಸ್ವೋಚ್ಚಗೈಃ ಷಡ್ಗ್ರಹೈರ್ಯುಕ್ತೇ ಮಿಥುನೇ ರಾಹುಸಂಯುತೇ । ರೇಣುಕಾಯಾಸ್ತು ಯೋ ಗರ್ಭಾದ್ ಅವತೀರ್ಣೋ ಹರಿಃ ಸ್ವಯಮ್ ।। ಎಂದು ವೈಶಾಖ ಶುದ್ಧ ತೃತೀಯಾ ತಿಥಿಯಂದು ಸಂಜೆ ಸೂರ್ಯಾಸ್ತವಾದ ಬಳಿಕ (ರಾತ್ರಿಯ ಮೊದಲಯಾಮದಲ್ಲಿ) ಶ್ರೀ ಪರಶುರಾಮದೇವರು ಅವತಾರ ಮಾಡಿದರು ಎಂದಿದೆ. ಪರಶುರಾಮದೇವರ ಅವತಾರ ಸೂರ್ಯಾಸ್ತದ ನಂತರ ಆಗಿರುವದರಿಂದ, ಪ್ರದೋಷವ್ಯಾಪಿನಿಯಾದ ವೈಶಾಖ ತೃತೀಯಾದಂದು ಪರಶುರಾಮ ಜಯಂತಿಯನ್ನು ಆಚರಿಸಬೇಕು. ಅಂದರೆ, ವೈಶಾಖ ಶುದ್ಧ ತೃತೀಯಾ ಯಾವ ದಿವಸದ ಸೂರ್ಯಾಸ್ತದಲ್ಲಿರುತ್ತದೆಯೋ ಆ ದಿವಸ ಪರಶುರಾಮ ಜಯಂತಿ. ಅಕ್ಷಯತೃತೀಯಾವನ್ನು ಆಚರಿಸಬೇಕಾದರೆ ಪೂರ್ವಾಹ್ಣವ್ಯಾಪಿನಿಯಾದ, ಅಂದರೆ ಸೂರ್ಯೋದಯದಿಂದ ಮಧ್ಯಾಹ್ನದವರೆಗೆ ಇರುವ ತೃತೀಯಾವನ್ನು ಆಚರಿಸಬೇಕು. ಈ ಹೇಮಲಂಬ ಸಂವತ್ಸರದಲ್ಲಿ ವೈಶಾಖ ಶುದ್ಧ ತೃತೀಯಾ ಶುಕ್ರವಾರ ಮಧ್ಯಾಹ್ನ ಸುಮಾರು ಒಂದೂ ಕಾಲು ಗಂಟೆಗೆ ಆರಂಭವಾಗಿ ಶನಿವಾರ ಸುಮಾರು 11 ಗಂಟೆಗೆ ಮುಗಿಯುತ್ತದೆ. ಅಂದರೆ ಪ್ರದೋಷವ್ಯಾಪಿನಿಯಾದ ತೃತೀಯಾ ಶುಕ್ರವಾರ ಇದೆ. ಅದಕ್ಕಾಗಿ ಶುಕ್ರವಾರದಂದು ಪರಶುರಾಮಜಯಂತಿ. ಪೂರ್ವಾಹ್ಣವ್ಯಾಪಿನಿಯಾದ ತೃತೀಯಾ ಶನಿವಾರ ಇದೆ. ಅದಕ್ಕಾಗಿ ಶನಿವಾರದಂದು ಅಕ್ಷಯ್ಯತೃತೀಯಾ. — ವಿಷ್ಣುದಾಸ ನಾಗೇಂದ್ರಾಚಾರ್ಯ