ಸಾಲಿಗ್ರಾಮದಿಂದ ಪಾಪಭೂಮಿಯನ್ನು ಕ್ಷೇತ್ರವನ್ನಾಗಿ ಮಾಡಬಹುದಲ್ಲವೇ?
ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಆಚಾರ್ಯರೇ, ಕೆಲವು ಪಂಡಿತರು ವಿದೇಶಕ್ಕೆ ಹೋಗುವಾಗ ಸಾಲಿಗ್ರಾಮವನ್ನು ತೆಗೆದುಕೊಂಡು ಹೋಗುವದನ್ನು ನಾನು ನೋಡಿದ್ದೇನೆ. ಇದರ ಬಗ್ಗೆ ಅವರನ್ನೇ ಕೇಳಿದರೆ, ನಾವು ಯಾವ ಪ್ರದೇಶಕ್ಕೆ ಸಾಲಿಗ್ರಾಮವನ್ನು ಒಯ್ಯುತ್ತೇವೆಯೋ ಆ ಪ್ರದೇಶ ಶುದ್ಧವಾಗಿ ಬಿಡುತ್ತದೆ ಎಂದು ಶ್ರೀಕೃಷ್ಣಾಮೃತಮಹಾರ್ಣವದಲ್ಲಿ ಇದೆ ಎಂದು ಹೇಳುತ್ತಾರೆ. ಇದು ನಿಜವೇ ದಯವಿಟ್ಟು ತಿಳಿಸಿಕೊಡಿ. 🙏🙏🙏 — ಶ್ರವಣ್ ಪ್ರಭು. ಸಾಲಿಗ್ರಾಮವಿರುವ ಸಾಮಾನ್ಯನೆಲವೂ ಪರಿಶುದ್ಧ ಕ್ಷೇತ್ರ ವಾಗುತ್ತದೆ, ನಿಜ. ಶ್ರೀಮದಾಚಾರ್ಯರು ಹೇಳಿದ್ದಾರೆ. ಆದರೆ ಪಾಪಭೂಮಿಯೂ ಕರ್ಮಭೂಮಿಯಾಗುತ್ತದೆ ಎಂದು ಸರ್ವಥಾ ಹೇಳಿಲ್ಲ. ನೋಡಿ, ಇವತ್ತಿನ ದಿವಸ ಕೊಳೆತ ನೀರನ್ನು recycle ಮಾಡುತ್ತಾರೆ. ಆ ನಂತರ ಅದನ್ನು ಉಪಯೋಗಿಸಬಹುದು ಎನ್ನುತ್ತಾರೆ. ಅಂದರೆ ಸ್ವಾಭಾವಿಕವಾಗಿ ಶುದ್ಧವಾದ ನೀರು, ದುಷ್ಟಪದಾರ್ಥಗಳ ಸಂಪರ್ಕಕ್ಕೆ ಬಂದಾಗ ಕೊಳೆಯಾಯಿತು. ಅದನ್ನು ಶುದ್ಧ ಮಾಡಿದೆವು. ಆದರೆ ವಿಷವನ್ನು ಅಮೃತವನ್ನಾಗಿ ಬದಲಾಯಿಸಲು ಸಾಧ್ಯವೇ? ಹಾಗೆ, ನಾವು ವಾಸಿಸುವ ನಮ್ಮ ಮನೆಯನ್ನೇನೋ ನಾವು ಶುದ್ಧವಿಟ್ಟುಕೊಳ್ಳಬಹುದು. ಆದರೆ ಊರಿನ ಜನರನ್ನೆಲ್ಲ ಶುದ್ಧವಾಗಿಡುವ ಕೆಲಸ ನಮ್ಮಿಂದಾಗುತ್ತದೆಯೇ, ಇಲ್ಲ. ನಮ್ಮ ಮನೆಯೂ ಕೆಲ ಬಾರಿ ಅಶುದ್ಧವಾದಾಗ, ಊರು ಅಶುದ್ಧವಾದಾಗ ಸಾಲಿಗ್ರಾಮದ ಸನ್ನಿಧಾನದಿಂದ ಶುದ್ಧಿ ಬರುತ್ತದೆ ಎಂದರ್ಥ. ಅಂದರೆ ಸ್ವಾಭಾವಿಕವಾಗಿ ಶುದ್ಧವಾದ ನೀರಿನಲ್ಲಿ ಅಶುದ್ಧಿ ಉಂಟಾದಾಗ ಅದನ್ನು ಶುದ್ಧ ಮಾಡುವಂತೆ, ಸ್ವಾಭಾವಿಕವಾಗಿ ಕರ್ಮಯೋಗ್ಯವಾದ ಭೂಮಿಯಲ್ಲಿ (ದುಷ್ಟರು ಬಂದು ಸೇರುವದು ಮುಂತಾದ ಕಾರಣಗಳಿಂದ) ಅಶುದ್ಧಿ ಉಂಟಾದಾಗ ಆ ಅಶುದ್ಧಿಯನ್ನು ಸಾಲಿಗ್ರಾಮ ದೂರ ಮಾಡಿ, ಇರುವ ನೆಲವನ್ನು ಕ್ಷೇತ್ರವನ್ನಾಗಿ ಮಾಡುತ್ತದೆ. ಅಶುದ್ಧಿಯನ್ನೂ ದೂರ ಮಾಡುತ್ತದೆ, ಶುದ್ಧಿಯನ್ನು ಇಮ್ಮಡಿ ಗೊಳಿಸಿ ಕ್ಷೇತ್ರವನ್ನಾಗಿ ಮಾಡುತ್ತದೆ. ಆದರೆ ಪಾಪಭೂಮಿಯನ್ನು ಕರ್ಮಭೂಮಿಯನ್ನಾಗಿ ಮಾಡುತ್ತದೆ ಎಂದು ಎಲ್ಲಿಯೂ ಹೇಳಿಲ್ಲ. ಸುಲಭವಾಗಿ ಅರ್ಥವಾಗಲು ಮತ್ತೂ ಒಂದು ದೃಷ್ಟಾಂತ ನೀಡುತ್ತೇನೆ. ದೇವರು ಪತಿತಪಾವನ. ಪಾತಕಿಗಳನ್ನೂ ಉದ್ಧಾರ ಮಾಡುತ್ತಾನೆ. ಅಂದರೆ ಸ್ವಾಭಾವಿಕವಾಗಿ ಸಜ್ಜನರಾದ ಜನರು ಅವಿದ್ಯೆಯ ಪ್ರಭಾವಕ್ಕೊಳಗಾಗಿ ಪಾಪಕರ್ಮ ಮಾಡಿ, ನಂತರ ಪಶ್ಚಾತ್ತಾಪಕ್ಕೊಳಗಾಗಿ ಹರಿಯ ಚರಣಕ್ಕೆರಗಿದಾಗ ಸ್ವಾಮಿ ಆ ಪಾಪವನ್ನು ಪರಿಹಾರ ಮಾಡುತ್ತಾನೆ. ಆದರೆ, ಸ್ವಾಭಾವಿಕವಾಗಿ ದುಷ್ಟರಾದ ಕಲಿ ಕಾಲನೇಮಿಗಳನ್ನು ಶ್ರೀಹರಿ ಉದ್ಧಾರ ಮಾಡುತ್ತಾನೆಯೇ. ಸರ್ವಥಾ ಮಾಡುವದಿಲ್ಲ. ಶುದ್ಧವಾದ ವಸ್ತು ಅಶುದ್ಧವಾದಾಗ ಅದನ್ನು ಶುದ್ಧಗೊಳಿಸಬಹುದೇ ಹೊರತು, ಸ್ವಾಭಾವಿಕವಾಗಿ ಅಶುದ್ಧವಾದ ವಸ್ತುವನ್ನು ಶುದ್ಧಗೊಳಿಸಲು ಸಾಧ್ಯವಿಲ್ಲ. ಭಗವಂತನೂ ಸ್ವಭಾವದುಷ್ಟರನ್ನು ಉದ್ಧಾರ ಮಾಡುವದಿಲ್ಲ. ಕಲಿ ಹರಿಯ ಕಾಲಿಗೂ ಬೀಳುವದಿಲ್ಲ. ಹರಿಯೂ ಕಲಿಯನ್ನು ಉದ್ಧಾರ ಮಾಡುವದಿಲ್ಲ. ಹಾಗೆ, ಪವಿತ್ರವಾದ ಭರತಭೂಮಿಯಲ್ಲಿ ಅಶುದ್ಧಿ ಉಂಟಾದಾಗ, ಸಾಲಿಗ್ರಾಮ, ಗ್ರಂಥಗಳು, ಮಹಾನುಭಾವರು ಅದನ್ನು ಕ್ಷೇತ್ರವನ್ನಾಗಿ ಮಾಡುತ್ತಾರೆ. ಅಥವಾ ಸಾಮಾನ್ಯವಾದ ನೆಲವನ್ನು ಕ್ಷೇತ್ರವನ್ನಾಗಿ ಮಾಡುತ್ತಾರೆ. ಸಾಮಾನ್ಯವಾದ ಅಬ್ಬೂರು ಗ್ರಾಮವನ್ನು ಶ್ರೀ ಬ್ರಹ್ಮಣ್ಯತೀರ್ಥಗುರುರಾಜರು ಕ್ಷೇತ್ರವನ್ನಾಗಿ ಮಾಡಿದಂತೆ. ಆದರೆ ಸ್ವಾಭಾವಿಕವಾಗಿ ಪಾಪಭೂಮಿಯಾದ ಪ್ರದೇಶವನ್ನು ಕರ್ಮಭೂಮಿಯನ್ನಾಗಿ ಮಾಡುವದಿಲ್ಲ. ಈ ರೀತಿ ಉತ್ತರ ನೀಡುವ ಪಂಡಿತರಿಗೆ ನನ್ನ ಎರಡು ಪ್ರಶ್ನೆಗಳಿವೆ. ಮೊದಲನೆಯ ಪ್ರಶ್ನೆ — ಒಂದು ಸಾಲಿಗ್ರಾಮವನ್ನು ತೆಗೆದುಕೊಂಡು ಹೋಗಿ ಪಾಪಭೂಮಿಯನ್ನು ಕರ್ಮಭೂಮಿಯನ್ನಾಗಿ ಮಾಡುವ ನಿಮ್ಮ ಉಪಾಯ ನಮ್ಮ ಪ್ರಾಚೀನ ಋಷಿ ಮುನಿಗಳಿಗೆ ತಿಳಿದಿರಲಿಲ್ಲವೇ? ಸುಮ್ಮನೇ ನಿಷೇಧವನ್ನು ಮಾಡುವ ಬದಲು ಅವರು, ನೀವು ಸಮುದ್ರಯಾನ ಮಾಡುವ ಪ್ರಸಂಗ ಬಂದಾಗ ಸಾಲಿಗ್ರಾಮ ಒಯ್ಡುಬಿಡಿ, ದೋಷವಿಲ್ಲ ಎಂದು ಹೇಳುತ್ತಿದ್ದರು. ಆ ರೀತಿಯಾದ ದೃಷ್ಟಾಂತವೂ ಇದೆ. ಕಲಿಂಗ, ವಂಗ, ಮಗಧ ಮುಂತಾದ ಪ್ರದೇಶಗಳು ಭಾರತದಲ್ಲಿಯೂ ನಿಷಿದ್ಧ. ಆದರೆ, ಅಲ್ಲಿಗೆ ತೀರ್ಥಯಾತ್ರೆಗಾಗಿ ಹೋಗಿ ದೋಷವಿಲ್ಲ, ಆದರೆ ಮನೋರಂಜನೆಗಾಗಿ, ವಾಸಕ್ಕಾಗಿ ಹೋಗಬೇಡಿ ಎಂದಿದ್ದಾರೆ. ಅಂದರೆ, ನಿಷಿದ್ಧಪ್ರದೇಶಕ್ಕೆ ಹೋಗುವ ಅನಿವಾರ್ಯತೆ ಬಂದಾಗ ಅದರ ಪರಿಹಾರವನ್ನೂ ಸೂಚಿಸಿದ್ದಾರೆ. ಇವತ್ತಿನ ಪಂಡಿತರಿಗೆ ತಿಳಿದಿರುವದು ನಮ್ಮ ವಸಿಷ್ಠಾದಿ ಪ್ರಾಚೀನ ಮಹರ್ಷಿಗಳಿಗೆ ತಿಳಿದಿರಲಿಲ್ಲವೇ? ಅಥವಾ ಅವರಿಗೂ ತಿಳಿಯದ್ದನ್ನು ಇವತ್ತಿನವರು ಸಂಶೋಧನೆ ಮಾಡಿ ಹೇಳಿದ್ದಾರೆಯೇ? ನೀವೇ ನಿರ್ಧರಿಸಿ. ನೋಡಿ, ಆತ್ಮಲಿಂಗವನ್ನು ರಾವಣ ಲಂಕೆಗೆ ಒಯ್ಯಲು ಪ್ರಯತ್ನಪಟ್ಟ. ದೇವತೆಗಳು ತಡೆದರು. ಶ್ರೀಕ್ಷೇತ್ರ ಗೋಕರ್ಣದಲ್ಲಿ ನಮ್ಮೊಡೆಯ ಉಳಿಯುವಂತೆ ಮಾಡಿದರು. ಪರಮಭಾಗವತೋತ್ತಮರಾದ ವಿಭೀಷಣಮಹಾರಾಜರು ಶ್ರೀರಂಗನಾಥನನ್ನು ಲಂಕೆಗೆ ಒಯ್ಯಲು ಪ್ರಯತ್ನ ಪಟ್ಟರು, ದೇವತೆಗಳು ತಡೆದು. ಶ್ರೀಕ್ಷೇತ್ರ ಶ್ರೀರಂಗದಲ್ಲಿ ಜಗತ್ಸ್ವಾಮಿ ಉಳಿಯುವಂತೆ ಮಾಡಿದರು. ಇದರಿಂದ ಏನು ಸೂಚನೆ ಮಾಡುತ್ತಿದ್ದಾರೆ, ಕರ್ಮಭೂಮಿಯಲ್ಲದ ಪ್ರದೇಶಕ್ಕೆ ಪೂಜಾರ್ಹಪದಾರ್ಥಗಳನ್ನು ಒಯ್ಯಬಾರದು ಎಂದು ತಾನೇ? ಯಾವ ಪಾಪಭೂಮಿಗೆ ಹೋಗುವದರಿಂದ ನಮ್ಮ ಬ್ರಾಹ್ಮಣ್ಯವನ್ನೇ ಕಳೆದುಕೊಳ್ಳುತ್ತೇವೆಯೋ, ಆ ಭೂಮಿಗೆ ಸಾಲಿಗ್ರಾಮಾದಿಗಳನ್ನೂ ಒಯ್ಯುವದು, ರಾಯರ, ಕೃಷ್ಣನ ಪ್ರತಿಷ್ಠಾಪನೆ ಮಾಡುವದು ಶಾಸ್ತ್ರದ ಉಲ್ಲಂಘನೆಯಲ್ಲವೇ? ಆಲೋಚಿಸಿ. ಎರಡನೆಯ ಪ್ರಶ್ನೆ — ಸಾಲಿಗ್ರಾಮದಿಂದ ಎಂತಹ ಭೂಮಿಯೂ ಶುದ್ಧಭೂಮಿಯಾಗುವದಾದರೆ ಅಮಂಗಳವಾದ ಶ್ಮಶಾನವೂ ಮಂಗಳವಾಗಬೇಕು ತಾನೇ. ನಾವು ಸಾಲಿಗ್ರಾಮ ತಂದಿದ್ದೇವೆ, ಹೀಗಾಗಿ ಪಾಪಭೂಮಿ, ಕರ್ಮಭೂಮಿಯಾಗಿದೆ ಎಂದು ಹೇಳುವ ಇದೇ ಪಂಡಿತರು ಹನ್ನೆರಡು ಸಾಲಿಗ್ರಾಮಗಳನ್ನು ಶ್ಮಶಾನಕ್ಕೆ ಒಯ್ದು ಚಿತೆಯ ಪಕ್ಕದಲ್ಲಿಯೇ ಮಂಟಪ ಹಾಕಿ ಮದುವೆ ಮಾಡಿಕೊಳ್ಳಲಿ, ಅಥವಾ ತಮ್ಮ ಮಗನಿಗೋ ಮಗಳಿಗೋ ಮದುವೆ ಮಾಡಲಿ. ಅಥವಾ ವಿದೇಶಪ್ರವಾಸವನ್ನೇ ಬದುಕನ್ನಾಗಿ ಮಾಡಿಕೊಂಡ ಸಂನ್ಯಾಸಿಗಳು ಚಿತೆಯ ಪಕ್ಕ ಮಂಟಪ ಹಾಕಿ ಪೂಜೆ ಮಾಡಲಿ. ತಯಾರಿದ್ದಾರೆಯೇ. ಯಾಕೆ, ಸಾಲಿಗ್ರಾಮಕ್ಕೆ ಆ ಶಕ್ತಿ ಇಲ್ಲವೇ. ಅಥವಾ ಈಗ ಆ ಉತ್ತರ ಇಲ್ಲವೇ. ಸಾಲಿಗ್ರಾಮದ ದೃಷ್ಟಾಂತದಿಂದ ಜನರ ದಾರಿ ತಪ್ಪಿಸುತ್ತಿರುವವರು ಯಾರು ಎಂದು ಈಗ ತಿಳಿಯಿತಲ್ಲವೇ? ಆಚಾರ್ಯರ ವಚನದ ಅಭಿಪ್ರಾಯ ಹೀಗಿದೆ — ಸಾಲಿಗ್ರಾಮವಿರುವ ಸಾಮಾನ್ಯವಾದ ಭೂಮಿಯೂ ಕ್ಷೇತ್ರವಾಗಿ ಪರಿವರ್ತಿತವಾಗುತ್ತದೆ ಎಂದು. ಅದಕ್ಕಾಗಿಯೇ ನಾವು ಸಾಲಿಗ್ರಾಮದ ಸನ್ನಿಧಿಯಲ್ಲಿ ಶ್ರಾದ್ಧಾದಿಗಳನ್ನು ಮಾಡುತ್ತೇವೆ. ಸಾಲಿಗ್ರಾಮ ಸಮೇತವಾಗಿಯೇ ಕನ್ಯಾದಾನವನ್ನು ಮಾಡುತ್ತೇವೆ. ಆಗ ನಮ್ಮ ಮನೆಗಳಲ್ಲಿ ಮಾಡುವ ಶ್ರಾದ್ಧ-ಕನ್ಯಾದಾನಗಳೂ ಅಪರಿಮಿತ ಪುಣ್ಯವನ್ನು ನೀಡುತ್ತವೆ ಎಂದು. ಹೊರತು, ಸಾಲಿಗ್ರಾಮ ಪಾಪಭೂಮಿಯನ್ನು ಕರ್ಮಭೂಮಿಯನ್ನಾಗಿ ಮಾಡುತ್ತದೆ ಎಂದು ಶ್ರೀಮದಾಚಾರ್ಯರು ಹೇಳಿಲ್ಲ. ತಪ್ಪು ಮಾಡಿದ ಬಳಿಕ, ಮಾಡಿದ್ದು ತಪ್ಪು ಎಂದು ಹರಿಯ ಚರಣಕ್ಕೆರಗುವದು ಸಾಧಕರ ಲಕ್ಷಣ. ಮಾಡಿದ್ದು ತಪ್ಪೇ ಅಲ್ಲ ಎನ್ನುವದು ಮಾಧ್ವರ ಲಕ್ಷಣವಲ್ಲ, ಸಾಧಕರ ಲಕ್ಷಣವಲ್ಲ. — ವಿಷ್ಣುದಾಸ ನಾಗೇಂದ್ರಾಚಾರ್ಯ