ರಾಮಚಂದ್ರ ಎಂಬ ಶಬ್ದದ ಅರ್ಥವೇನು?
ರಾಮದೇವರಿಗೆ ರಾಮಚಂದ್ರ ಎಂದು ಹೆಸರು ಬರಲು ಕಾರಣವೇನು? ರಾಮದೇವರು ಸೂರ್ಯವಂಶದಲ್ಲಿ ಅವತಾರ ಮಾಡಿದವರು ಅಲ್ಲವೇ? ರಾಮಶಬ್ದದೊಡನೆ ಚಂದ್ರ ಸೇರಿಸಿ ಹೇಳಿದಾಗ ವಿಶೇಷ ಅರ್ಥವಿದೆಯೇ? — ಪ್ರಸಾದ್ ರಾವ್ ಸೂರ್ಯವಂಶದಲ್ಲಿ ಹುಟ್ಟಿಬಂದ ಮಾತ್ರಕ್ಕೆ, ಚಂದ್ರನ ಹೆಸರಿನಿಂದ ಕರೆಯಬಾರದು ಎಂದಿಲ್ಲ. ಸೂರ್ಯವಂಶದಲ್ಲಿಯೇ ಹರಿಶ್ಚಂದ್ರ ಎಂಬ ಚಕ್ರವರ್ತಿಯಿಲ್ಲವೇ. ಚಂದ್ರವಂಶದಲ್ಲಿ ಸ್ವಯಂ ಸೂರ್ಯ ಕರ್ಣನಾಗಿ ಹುಟ್ಟಿ ಬರಲಿಲ್ಲವೇ? (ಕರ್ಣನ ತಾಯಿ ಕುಂತೀದೇವಿ ಚಂದ್ರವಂಶವಾದ ಯದುವಂಶದವಳು. ಕರ್ಣನನ್ನು ಸಾಕಿದ ಅಧಿರಥನೂ ಚಂದ್ರವಂಶಕ್ಕೆ ಸೇರಿದವನೇ. ಚಂದ್ರವಂಶದ ಯಯಾತಿಯ ಮಗ “ಅನು”ವಿನ ವಂಶದಲ್ಲಿ ಜಯದ್ರಥ ಎಂಬ ರಾಜನಾಗುತ್ತಾನೆ. ಇವನು ಕ್ಷತ್ರಿಯಳನ್ನು ಮದುವೆಯಾಗದೇ ಸೂತಜಾತಿಯ ಹೆಣ್ಣನ್ನು ಮದುವೆಯಾಗುತ್ತಾನೆ. ಅಲ್ಲಿಂದ ಮುಂದಿನವರೆಲ್ಲ ಸೂತರಾಗಿಯೇ ಮುಂದುವರೆಯುತ್ತಾರೆ, ಕಾರಣ ತಾಯಿಯ ಜಾತಿಯೇ ಮಕ್ಕಳಿಗೆ ಬರುವದು. ಈ ಜಯದ್ರಥನಿಂದ ಐದನೆಯ ತಲೆ ಅಧಿರಥ. ಅವನ ಸಾಕುಮಗ ಕರ್ಣ. ) ಚಂದ್ರ ಎಂದರೆ ಆಹ್ಲಾದವನ್ನು ಉಂಟುಮಾಡುವವನು ಎಂದರ್ಥ. ರಾಮಚಂದ್ರ ಎಂದರೆ ಚಂದ್ರನಂತೆ ಆಹ್ಲಾದವನ್ನೀಯುವವನು ಎಂದರ್ಥ. ಶ್ರೀ ರಾಮದೇವರನ್ನು ರಾಮಚಂದ್ರ ಎಂಬ ಹೆಸರಿನಿಂದ ರಾಮಾಯಣ, ಮಹಾಭಾರತ, ಭಾಗವತಗಳು ಕರೆದಿಲ್ಲ. ಶ್ರೀಮದಾಚಾರ್ಯರೂ ನೇರವಾಗಿ ಪ್ರಯೋಗ ಮಾಡಿಲ್ಲ. ಆದರೆ, “ರಾಮಾವತಾರೋ ಹರಿರೀಶಚಂದ್ರಮಾಃ” ಎಂದು ಶ್ರೀರಾಮದೇವರನ್ನು ಚಂದ್ರನಿಗೆ ಹೋಲಿಸಿದ್ದಾರೆ. ಚಂದ್ರನ ಬಿಂಬ ಕ್ಷೀಣವಾಗುತ್ತದೆ, ಅವನ ಕಾಂತಿಯೂ ಕ್ಷೀಣವಾಗುತ್ತದೆ, ಆದರೆ ರಾಮದೇವರು ಅಕ್ಷೀಣವಾದ ಸುಖಸ್ವರೂಪರು. ಚಂದ್ರನಲ್ಲಿನ ದೋಷ ರಾಮನಲ್ಲಿಲ್ಲ. ಚಂದ್ರ ತನ್ನ ಕಿರಣಗಳಿಂದ ಭೂಮಿಯನ್ನು ವ್ಯಾಪಿಸುತ್ತಾನೆ. ತನ್ನ ಮಹಾಸಾಮರ್ಥ್ಯದಿಂದ ಧರ್ಮ-ಕರ್ಮಗಳನ್ನೂ ನಿಯಮಿಸಿದ ರಾಮಚಂದ್ರ ಎಲ್ಲೆಡೆಯೂ ವ್ಯಾಪ್ತ. ಬಿಸಿಲಿನಿಂದ ಬೆಂದವರಿಗೆ ಚಂದ್ರ ತಂಪನ್ನೀಯುತ್ತಾನೆ. ತನ್ನ ಭಕ್ತರ ಸಂತಾಪಗಳನ್ನೆಲ್ಲ ರಾಮಚಂದ್ರ ಪರಿಹರಿಸುತ್ತಾನೆ. ಹೀಗಾಗಿ, ಅಕ್ಷೀಣಸುಖಬಿಂಬನಾದ, ತನ್ನ ಐಶ್ವರ್ಯದಿಂದ ಎಲ್ಲೆಡೆ ವ್ಯಾಪಿಸಿರುವ, ಅಸ್ತಮಾನ ಎಂಬುದೇ ಇಲ್ಲದ, ಭಕ್ತರ ತಾಪವನ್ನು ಪರಿಹರಿಸುವ ರಾಮದೇವರೇ ಮುಖ್ಯಾರ್ಥದಲ್ಲಿ ಚಂದ್ರ ಎಂಬ ಶಬ್ದದಿಂದ ವಾಚ್ಯರಾದ್ದರಿಂದ, ರಾಮಚಂದ್ರ ಎಂದು ಕರೆಸಿಕೊಳ್ಳುತ್ತಾರೆ ಎಂದು ಆಚಾರ್ಯರು ತಿಳಿಸುತ್ತಾರೆ. ರಾಮಚಂದ್ರ ಎಂಬ ಶಬ್ದದ ಪ್ರಯೋಗ ಪುರಾಣಗಳಲ್ಲಿ ಹಾಗೂ ಸ್ತೋತ್ರಸಾಹಿತ್ಯದಲ್ಲಿ ವಿಪುಲವಾಗಿ ಕಂಡು ಬರುತ್ತದೆ. ಶ್ರೀಮದ್ವಾದಿರಾಜಗುರುಸಾರ್ವಭೌಮರು “ಪಾತು ಮಾಂ ರಾಮಚಂದ್ರಃ” ಎಂದು ತಮ್ಮ ತೀರ್ಥಪ್ರಬಂಧದಲ್ಲಿ ಪ್ರಯೋಗ ಮಾಡಿದ್ದಾರೆ. ರಾಮಚಂದ್ರ ಎಂಬ ಹೆಸರು ಜನಸಾಮಾನ್ಯರಲ್ಲಿ ವಿಪುಲವಾಗಿ ಮೊದಲಿನಿಂದಲೂ ಬಳಕೆಯಿದೆ. ಇತಿಹಾಸದಲ್ಲಿ ರಾಮಚಂದ್ರ ಎಂಬ ಹೆಸರಿನ ಅನೇಕ ಗ್ರಂಥಕಾರರು ಆಗಿಹೋಗಿದ್ದಾರೆ. ನಾಟ್ಯಶಾಸ್ತ್ರವನ್ನು ಬರೆದ ರಾಮಚಂದ್ರಪಂಡಿತನ ಹೆಸರು ಸುಪ್ರಸಿದ್ದ. ಶ್ರೀಮದಾಚಾರ್ಯರ ಪರಂಪರೆಯಲ್ಲಿ ಶ್ರೀ ರಾಮಚಂದ್ರತೀರ್ಥರು ಎಂಬ ಹೆಸರಿನ ಅನೇಕ ಯತಿವರೇಣ್ಯರು ಆಗಿಹೋಗಿದ್ದಾರೆ. — ವಿಷ್ಣುದಾಸ ನಾಗೇಂದ್ರಾಚಾರ್ಯ