ಹಸ್ತೋದಕ, ಪಾದೋದಕ ಸ್ವೀಕರಿಸಬಹುದೇ?
ಗುರುಗಳೆ, ನೀವೇ ಹಿಂದೊಮ್ಮೆ ನಾನು ಗುರುಗಳ ಪಾದೋದಕದ ಬಗ್ಗೆ ಕೇಳಿದಾಗ , ನೀವು ಗುರುಗಳ( ರಾಯರು ಇತ್ಯಾದಿ ಯತಿಗಳ), ರುದ್ರ ದೇವರ ತೀರ್ಥ ಸೇವಿಸಬಾರದು, ಕೇವಲ ತಲೆತಲೆಯಮೇಲೆ ಹಾಕಿಕೊಳ್ಳಬೇಕು ಎಂದಿದ್ದಿರಿ..ಈಗ ಸ್ವೀಕರಿಸಬೇಕು ಎನ್ನುತ್ತಿದ್ದೀರಿ. — ರಾಮಮೂರ್ತಿ ಕುಲಕರ್ಣಿ. ನಿಜ. ಈ ಹಿಂದೆ ನಾನೂ ಸಹ ಉತ್ತರಾದಿಮಠದ ಪ್ರಭಾವಕ್ಕೆ ಒಳಗಾಗಿದ್ದವನು. ಆದರೆ ಪ್ರಾಂಜಲವಾಗಿ ವಿಚಾರ ಮಾಡಲು ಆರಂಭ ಮಾಡಿದಾಗ ಮತ್ತು ಉತ್ತರಾದಿಮಠದ ಪರಂಪರೆಯಲ್ಲಿ ಬಂದ ಶ್ರೀ ಸತ್ಯಪರಾಕ್ರಮರ ವಚನವೇ ಇರುವಾಗ ಆ ಮಠದವರ ಆಚರಣೆಯ ಕುರಿತು ಸಂಶಯ ತಲೆದೋರಲು ಆರಂಭವಾಯಿತು. ಆ ಬಳಿಕ ಶ್ರೀ ವಿದ್ಯಾವಾರಿಧಿತೀರ್ಥಗುರುಸಾರ್ವಭೌಮರ ಗುರುಮಾಹಾತ್ಮ್ಯಮಂಜರಿಯಲ್ಲಿನ ಹಸ್ತೋದಕ ಸ್ವೀಕಾರದ ಎಲ್ಲ ಪ್ರಶ್ನೆಗಳಿಗೂ ನಿಖರವಾದ ಉತ್ತರಗಳನ್ನು ಓದಿದ ಬಳಿಕ ಸ್ವೀಕರಿಸಲೇಬೇಕು ಎನ್ನುವ ನಿಶ್ಚಯವಾಯಿತು. ಇವತ್ತಿನ ಅನೇಕ ಉತ್ತರಾದಿಮಠದ ಆಚರಣೆಗಳು ಉತ್ತರಾದಿಮಠದ ಯತಿ-ಜ್ಞಾನಿಗಳ ವಚನಗಳಿಗೆ ವಿರುದ್ಧವಾಗಿವೆ. ಉದಾರಹಣೆಗೆ, ಶಾಕವ್ರತದಲ್ಲಿ ಮಾವಿನಹಣ್ಣು, ತೆಂಗಿನಕಾಯಿ ಬರುತ್ತದೆ ಎಂದು ಶ್ರೀ ಛಲಾರೀ ನರಸಿಂಹಾಚಾರ್ಯರೇ ಬರೆದಿದ್ದಾರೆ. ಆದರೆ ಉತ್ತರಾದಿ ಮಠದವರೇ ಅದನ್ನು ಆಚರಿಸುವದಿಲ್ಲ. ಹಸ್ತೋದಕವನ್ನು , ಪಾದೋದಕವನ್ನು ಸ್ವೀಕರಿಸಬೇಕು ಎಂದು ಶ್ರೀ ಸತ್ಯಪರಾಕ್ರಮರೇ ಬರೆದಿದ್ದಾರೆ ಆದರೆ ಉತ್ತರಾದಿಮಠದವರು ಅನುಸರಿಸುವದಿಲ್ಲ. ಅಷ್ಟೇಕೆ, ಮೊನ್ನೆ ಅಧಿಕ ಆಷಾಢದಲ್ಲಿ ಮಳಖೇಡದಲ್ಲಿ ಸತ್ಯಾತ್ಮರು ದ್ರಾಕ್ಷಿ, ಗೋಡಂಬಿ, ಬಾದಾಮಿಗಳ ಅಭಿಷೇಕವನ್ನು ವೃಂದಾವನಗಳಿಗೆ ಮಾಡಿದರು. ಅದನ್ನೇ ವಿಪುಲವಾಗಿ ಪ್ರಸಾದವಾಗಿ ಹಂಚಲಾಯಿತು. ನನಗೂ ನೀಡಿದರು. ತಿರುಕೊಯಿಲೂರಿನಲ್ಲಿ ರಘೂತ್ತಮರ ವೃಂದಾವನದ ಪಂಚಾಮೃತವನ್ನೂ ಹೀಗೆಯೇ ಹಂಚುತ್ತಾರೆ. ಪಾದೋದಕವನ್ನು ಸ್ವೀಕರಿಸಬಾರದು, ಪಂಚಾಮೃತವನ್ನು ಸ್ವೀಕರಿಸಬಹುದು ಎನ್ನುವದು ಯಾತರ ನ್ಯಾಯ? ಹೀಗೆ ಅವರ ಆಚರಣೆಗಳು ಪರಸ್ಪರ ವಿರುದ್ಧ. ಪ್ರಾಂಜಲವಾಗಿ ವಿಚಾರ ಮಾಡುತ್ತ ಹೋದಾಗ ಒಂದೊಂದೇ ಆಭಾಸಗಳು ತೋರಲು ಆರಂಭವಾದವು. ಪ್ರಮಾಣವಿರುದ್ಧ ಎಂದು ಅರ್ಥವಾಯಿತು. ಟೀಕಾಕೃತ್ಪಾದರ ವಚನವಿದೆ - ಅಂಗೀಕುರ್ಮಃ ಶಶವಿಷಾಣಮಪಿ ಯದಿ ಪ್ರಾಮಾಣಿಕಂ ಸ್ಯಾತ್ ಎಂದು. ಅಂದರೆ, ಮೊಲದ ಕೋಡು ಇವತ್ತು ಅಸತ್ಯವಾಗಿರಬಹುದು. ಆದರೆ ನಾಳೆ ವಿಜ್ಞಾನ ಏನೋ ಸಂಶೋಧನೆ ಮಾಡಿ ಮೊಲಕ್ಕೆ ಕೋಡು ಮೂಡಿಸಿದರೆ ಅವಶ್ಯವಾಗಿ ನಾವು ಮೊಲದ ಕೋಡನ್ನು ಸತ್ಯ ಎಂದು ಒಪ್ಪುತ್ತೇವೆ. ಒಂದು ವಿಷಯವನ್ನು ಸತ್ಯ ಎಂದು ಒಪ್ಪಲು, ಅಸತ್ಯ ಎಂದು ಒಪ್ಪಲು, ಪ್ರಮಾಣ, ಪ್ರಮಾಣಾಭಾವಗಳೇ ಕಾರಣವಾಗಬೇಕು. ಆಗ್ರಹವಲ್ಲ. ಇದೇ ಮಧ್ವಸಿದ್ಧಾಂತ. ಶ್ರೀ ತ್ರಿವಿಕ್ರಮಪಂಡಿತಾಚಾರ್ಯರಾದಿ ಮಹಾನುಭಾವರು ತಾವು ಹಿಂದೆ ತಿಳಿದ, ಪ್ರತಿಪಾದಿಸುತ್ತಿದ್ದ ಅದ್ವೈತ ಸಿದ್ಧಾಂತವನ್ನು ಬಿಟ್ಟು ಶ್ರೀಮಧ್ವಸಿದ್ಧಾಂತವನ್ನು ಸ್ವೀಕರಿಸಲಿಲ್ಲವೇ, ಹಾಗೆ. ಹಸ್ತೋದಕದ ವಿಷಯದಲ್ಲಿ, ಶ್ರೀಮದ್ವಾದಿರಾಜಗುರುಸಾರ್ವಭೌಮರ ಋಜುತ್ವದ ವಿಷಯದಲ್ಲಿ ಇಲ್ಲಸಲ್ಲದ ಅಪಪ್ರಚಾರಗಳು ನಡೆದಿವೆ. ಯಾವ ಮಠಕ್ಕೂ, ಯಾರ ಮಾತಿಗೂ ಜೋಲು ಬೀಳದೆ ನಿಷ್ಪಕ್ಷಪಾತ ಸಂಶೋಧನೆಯನ್ನು ನಡೆಸಿ ಪ್ರಮಾಣಗಳ ಅನುಸಾರಿಯಾಗಿ ತತ್ವಗಳನ್ನು ತಿಳಿಯ ಹೊರಟರೆ ಎಲ್ಲವೂ ತಿಳಿಯಾಗುತ್ತದೆ. ಇದು ನನ್ನ ದಾರಿ. ನಾನು ನನ್ನ ಬನ್ನಂಜೆ ವಿಮರ್ಶದ ಪುಸ್ತಕದಲ್ಲಿಯೂ ಬರೆದಿದ್ದೇನೆ. ನಾನು ಬರೆದ ವಿಷಯವನ್ನು ತಪ್ಪು ಎಂದು ಪ್ರತಿಪಾದಿಸಿದಲ್ಲಿ ಅವಶ್ಯವಾಗಿ ಒಪ್ಪಿ ಸರಿಯಾದುದನ್ನು ಸ್ವೀಕರಿಸುತ್ತೇನೆ ಎಂದು. ಅದು ಬಾಯಿಮಾತಲ್ಲ, ನಾನು ಅನುಸರಿಸುವ ಮಾರ್ಗ. ಹಸ್ತೋದಕದ ವಿಷಯವನ್ನು ಸದಾಚಾರಸ್ಮೃತಿಯ ಲೇಖನ-ಉಪನ್ಯಾಸಮಾಲಿಕೆಯಲ್ಲಿ ಭೋಜನದ ಪ್ರಕರಣ ಬಂದಾಗ ವಿಸ್ತೃತವಾಗಿ ಚರ್ಚಿಸಿ ನಿಮ್ಮ ಮುಂದಿಡುತ್ತೇನೆ. ಪ್ರಮಾಣಗಳಿಗೆ ಅನುಕೂಲವಾಗಿದೆ ಮತ್ತು ಯುಕ್ತಿಬದ್ಧವಾಗಿದೆ, ಮನಸ್ಸಿಗೆ ಸರಿತೋರುತ್ತದೆ ಎಂದಲ್ಲಿ ನೀವು ಅದನ್ನು ಸ್ವೀಕರಿಸಬಹುದು. ಋಜುತ್ವದ ವಿಷಯದ ಕುರಿತು ಇರುವ ಎಲ್ಲ ಆಕ್ಷೇಪಗಳಿಗೆ ಇನ್ನೊಂದೆರಡು ವರ್ಷಗಳಲ್ಲಿ ಉತ್ತರಿಸುತ್ತೇನೆ. ಈಗಾಗಲೇ ಹಿಡಿದ ಕಾರ್ಯಗಳು ಮುಗಿದ ನಂತರ ಆ ದೊಡ್ಡ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾಗಿದೆ. — ವಿಷ್ಣುದಾಸ ನಾಗೇಂದ್ರಾಚಾರ್ಯ