24/12/2018
ಆತ್ಮೀಯ ವಿಶ್ವನಂದಿನಿ ಬಾಂಧವರ ಗಮನಕ್ಕೆ, ವಿಶ್ವನಂದಿನಿಯಲ್ಲಿ ಸಂಸ್ಕೃತ ಸುರಭಿ ಆರಂಭವಾಗಿದೆ ಮತ್ತು ಭಾಗವತದ ಪ್ರವಚನಗಳು ನಡೆಯುತ್ತಿವೆ. ಇಷ್ಟು ದಿವಸಗಳ ಕಾಲ ಸಂಸ್ಕೃತ ಸುರಭಿಯ ನಿರ್ಮಾಣದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದ ಕಾರಣಕ್ಕೆ ಹೆಚ್ಚಿನ ಪ್ರವಚನಗಳನ್ನು ಮಾಡಲು ಸಾಧ್ಯವಾಗಿರಲಿಲ್ಲ. ಸಂಸ್ಕೃತ ಸುರಭಿಯ ಒಂದು ಸಮಗ್ರ ಪಾಠವನ್ನು (ವಿಡಿಯೋ, ಅಭ್ಯಾಸ ಮತ್ತು ಪರೀಕ್ಷೆಗಳನ್ನು) ತಯಾರು ಮಾಡಿ Upload ಮಾಡಲು ನಾಲ್ಕು ದಿವಸಗಳ ಪೂರ್ಣ ಸಮಯ ಬೇಕು. ಒಂದು ಗಂಟೆಯ ಪ್ರವಚನ ಮಾಡಿ ಅದನ್ನು Upload ಮಾಡಲು ಇಬ್ಬರಿಗೆ ಪೂರ್ಣವಾಗಿ ಹನ್ನೆರಡು ಗಂಟೆಗಳ ಸಮಯ ಬೇಕು. ಇಷ್ಟರ ಮಧ್ಯದಲ್ಲಿ ಆ ವಿಷಯದ ಕುರಿತ ಸಂಶೋಧನೆ, ನಿರ್ಣಯಗಳಾಗಬೇಕು. ಆದ್ದರಿಂದ ಪ್ರವಚನ ಮತ್ತು ವಿಡಿಯೋಗಳನ್ನು Upload ಮಾಡಲು ವಿಲಂಬವಾಗುತ್ತಿದೆ. ಇದರ ಜೊತೆಯಲ್ಲಿ ಸರಿಯಾದ ಸಮಯಕ್ಕೆ ಹಾಕಲಾರದ್ದಕ್ಕೆ ಮನಸ್ಸಿಗೆ ತುಂಬ ಬೇಸರವಾಗುತ್ತಿದೆ. ಸಾವಿರಾರು ಸಜ್ಜನರು ಪ್ರತೀಕ್ಷೆ ಮಾಡುತ್ತಿರುತ್ತಾರೆ. ಆದರೆ ಆ ಸಮಯಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ. ಇದು ಹೀಗೇ ಮುಂದುವರೆಯಬಾರದು, ಮತ್ತು ಪಾಠ-ಪ್ರವಚನಗಳು ನಿಮಗೆ ನಿರಂತರವಾಗಿ ದೊರೆಯುತ್ತಿರಬೇಕು. ಅದಕ್ಕಾಗಿ ಸಾಕಷ್ಟು ಪಾಠಗಳನ್ನು ಮತ್ತು ಪ್ರವಚನಗಳನ್ನು ಮೊದಲೇ ಮಾಡಿಟ್ಟುಬಿಡುವ ನಿರ್ಧಾರ ಕೈಗೊಂಡಿದ್ದೇನೆ. ಅದಕ್ಕಾಗಿ ಸುಮಾರು ನಾಲ್ಕೈದು ತಿಂಗಳುಗಳ ಕಾಲಾವಕಾಶದ ಆವಶ್ಯಕತೆಯಿದೆ. ಈ ಸಮಯದಲ್ಲಿ ಸಾಕಷ್ಟು ಆಡಿಯೋ ವಿಡಿಯೋಗಳನ್ನು ತಯಾರು ಮಾಡಿಕೊಂಡು ಬಿಡುತ್ತೇನೆ. ಕನಿಷ್ಠ ಆರು ತಿಂಗಳಿಗಾಗುವಷ್ಟು Content ಮಾಡಿಟ್ಟುಕೊಂಡರೆ ನಿಮಗೆ ನಿರಂತರವಾಗಿ ನೀಡಬಹುದು. ನಾನು ಸಾಕಷ್ಟು ಕಾರ್ಯಗಳನ್ನು ಮಾಡಬಹುದು. ಸಂಸ್ಕೃತಸುರಭಿಯಲ್ಲಿ ನೂರು ಪಾಠಗಳು, ವಿಶ್ವನಂದಿನಿಗಾಗಿ 200 ಪ್ರವಚನಗಳನ್ನು ಸಿದ್ಧ ಮಾಡಿಕೊಂಡು ಪ್ರಕಟ ಮಾಡಲು ಆರಂಭಿಸುತ್ತೇನೆ. ನೀವು ಅಷ್ಟು ಪ್ರವಚನಗಳನ್ನು ಕೇಳಿ, ಪಾಠಗಳನ್ನು ಕಲಿಯುವಷ್ಟರಲ್ಲಿ ಮುಂದಿನದನ್ನು ಸಿದ್ಧ ಪಡಿಸುತ್ತೇನೆ. ಇಷ್ಟರ ಮಧ್ಯದಲ್ಲಿ ದ್ವಿತೀಯಸ್ಕಂಧದ ಪ್ರವಚನಗಳನ್ನು ಮುಗಿಸಿಕೊಡುತ್ತೇನೆ. ಸಂಸ್ಕೃತಸುರಭಿಯಲ್ಲಿ ಎರಡು ನಮೂರು ವಾರಕ್ಕೆ ಒಂದಾದರೂ ಪಾಠವನ್ನು ಹಾಕುತ್ತೇನೆ. ಆಸಕ್ತ ಜಿಜ್ಞಾಸುಗಳು ಬೇಸರಿಸಬಾರದು, ಸಹಕರಿಸಬೇಕು ಎಂದು ಅಪೇಕ್ಷಿಸುತ್ತೇನೆ. ಅಭಿಮಾನವಿರಲಿ — ವಿಷ್ಣುದಾಸ ನಾಗೇಂದ್ರಾಚಾರ್ಯ
Play Time: 05:51
Size: 5.51 MB